ಸರ್ಕಾರಿ ಶಾಲೆಗಳಲ್ಲಿ ಉತ್ಕøಷ್ಟ ಶಿಕ್ಷಣ; ಜಿಲ್ಲಾಧಿಕಾರಿ.

0
115

ದಾವಣಗೆರೆ, ಆ.31:ಗ್ರಾಮ ಭಾಗದ ಸುತ್ತಮುತ್ತಲಿನ ಹಿನ್ನೆಲೆಯಲ್ಲಿ ಜ್ಞಾನರ್ಜನೆ ಮಾಡಿಕೊಂಡು ಇಂದು ದೇಶ ಕಟ್ಟುವಂತಹ ಪ್ರತಿಭೆಗಳು ಸ್ವತಂತ್ರ್ಯ ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವುದು ಸರ್ಕಾರಿ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲೇ ಹೊರತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಕಡಿಮೆ ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಶಿಕ್ಷಣ ಮಹತ್ವವಾದದ್ದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಕ್ಷೇತ್ರ ಜನಸಂಪರ್ಕ ಕಾರ್ಯಲಯ, ಶಿವಮೊಗ್ಗ, ಪ್ರಾದೇಶಿಕ ಜನಸಂಪರ್ಕ ಕಾರ್ಯಲಯ, ಬೆಂಗಳೂರು, ಸಮಾಚಾರ ಮತ್ತು ಪ್ರಸಾರ ಸಚಿವಾಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಅತೀ ಹೆಚ್ಚು ಸಾಧನೆ ಮಾಡಿರುವ ಮೇಧಾವಿಗಳು ಹೆಚ್ಚಾಗಿ ಕನ್ನಡ ಮಾಧ್ಯಮದಲ್ಲಿ ಓದಿ ಬಂದಿದ್ದವರೆ ಆಗಿರುವುದರಿಂದ, ಸರ್ಕಾರಿ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ನಿರ್ಲಕ್ಷ್ಯ ವಹಿಸಬಾರದು. ಹಸುವಿನ ಹಾಲಿನಂತೆ ನಮ್ಮ ಬದುಕು ಸಾಗಿಸಬೇಕು. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ನಮ್ಮ ಉಪಯೋಗವಾಗಬೇಕು. ವಿದ್ಯಾರ್ಥಿಗಳು ತನ್ಮೂಲಕ ನಮ್ಮ ದೇಶದಲ್ಲಿರುವಂತಹ ಸಂಪನ್ಮೂಲಗಳನ್ನು ದೇಶದ ಸರ್ವಾಂಗೀಣ ಪ್ರಗತಿ ಮತ್ತು ಅಭಿವೃದ್ಧಿಗೆ ಉಪಯೋಗಿಸಿಕೊಂಡು ನಮ್ಮ ಬದುಕನ್ನು ಅರ್ಥಪೂರ್ಣವಾಗಿ ಮಾಡಿಕೊಳ್ಳಬೇಕು. ಕುಟುಂಬದ ಆಸ್ತಿ ಆಗುವುದಕ್ಕಿಂತ ಸಮಾಜದ ಆಸ್ತಿ ಆಗುವ ಕನಸು ಕಾಣುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಸ್ವಾರ್ಥಕ್ಕಾಗಿ ಬದುಕದೇ ದೇಶಕ್ಕಾಗಿ ಬದುಕಿದ ಕಾರಣ ಇಂದು ನಾವು ಅನೇಕ ಗಣ್ಯ ವ್ಯಕ್ತಿಗಳನ್ನು ನೆನಪು ಮಾಡಿಕೊಳ್ಳುತ್ತೇವೆ. ದೇಶಕ್ಕಾಗಿ ಬಹಳಷ್ಟು ಮಂದಿ ರಕ್ತ ಬಸಿದು ತ್ಯಾಗ, ಬಲಿದಾನ ಮಾಡಿದ್ದರ ಪರಿಣಾಮವಾಗಿ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇಂತಹ ಸ್ವಾತಂತ್ರ್ಯವನ್ನು ನಾವು ಇಂದು ಹೇಗೆ ಬಳಕೆ ಮಾಡುತ್ತಿದ್ದೇವೆ ಎಂಬುದರ ಕುರಿತು ಯುವಜನರು ಯೋಚಿಸಬೇಕು. ಸ್ವಾತಂತ್ರ್ಯ ಎಂದರೆ ಸ್ವೆಚ್ಛಚಾರವಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಬ್ರಿಟಿಷರ ಕಾಲದಲ್ಲಿ ನಮ್ಮ ಸಂಪತ್ತನ್ನೂ ನಾವು ಅನುಭವಿಸುವಂತಿಲ್ಲ. ಆದರೆ, ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಸಂಪನ್ಮೂಲಗಳನ್ನು ನಾವೇ ಅನುಭವಿಸುತ್ತಿದ್ದೇವೆ. ಇದೇ ನಿಜವಾದ ಸ್ವಾತಂತ್ರ್ಯ. ದೇಶದ ಹಳ್ಳಿಗಳ ಕಟ್ಟ ಕಡೆಯ ಮನುಷ್ಯನಿಗೂ ಸರ್ಕಾರದ ಯೋಜನೆಗಳು ಮುಟ್ಟಬೇಕು ಎಂಬುದು ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಸ್ವಾತಂತ್ರ್ಯ ಸಿಕ್ಕ ನಂತರ ದೂರದೃಷ್ಟಿಯಿಂದ ರೂಪಿಸಿದ ಅನೇಕ ಯೋಜನೆಗಳು ಇಂದು ಫಲ ಕೊಡುತ್ತಿವೆ. ಯೋಜನೆಗಳ ಫಲಶೃತಿಗಳಿಂದ ದೇಶ ಅಭಿವೃದ್ಧಿಯಾಗುತ್ತಿರುವುದರ ಪರಿಣಾಮ ಇಂದು ಇಡೀ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ ಎಂದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು ಮತ್ತು ಸಂಶೋಧಕರಾದ ಡಾ.ಬಿ.ಸಿ.ಮಹಾಬಲೇಶ್ವರಪ್ಪ ಅವರು ಮಾತನಾಡಿ, ಭಾರತದಲ್ಲಿ ರಾಜರ ಆಡಳಿತದಲ್ಲೂ ಪ್ರಜಾಪ್ರಭುತ್ವದ ಆಶಯವಿತ್ತು. ಚೋಳರ ಕಾಲದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ಇತ್ತು. ಪ್ರಜಾಪ್ರಭುತ್ವದಲ್ಲಿ ನಾವಿಂದು ಮಾನವ ಹಕ್ಕುಗಳ ಕುರಿತು ಮಾತನಾಡುತ್ತಿದ್ದೇವೆ. ಆದರೆ ಮಿಥಾಕ್ಷರದಲ್ಲಿ ವಿಜ್ಞಾನೇಶ್ವರ ಮಾನವ ಹಕ್ಕುಗಳ ಸಂರಕ್ಷಣೆ, ಸಮಾನತೆ, ಸ್ತ್ರೀ ಧರ್ಮ, ವಿಚ್ಛೇದನವನ್ನು ಇತ್ಯರ್ಥ ಮಾಡುವ ವಿಧಾನ, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ಕುರಿತು ವಿವರಿಸಿದ್ದು, ಪ್ರಸ್ತುತ ಸಮಾಜಕ್ಕೆ ಆಧಾರ ಗ್ರಂಥವಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
12 ನೇ ಶತಮಾನದಲ್ಲಿ ಜಗತ್ತಿನ ಮೊದಲ ಸಂಸತ್ ಆದ ಅನುಭವಮಂಟಪದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯವಾಗಿ ಇರುವ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಅವುಗಳನ್ನು ಇತ್ಯರ್ಥಗೊಳಿಸುತ್ತ, ಕಾಯಕ ಮತ್ತು ದಾಸೋಹಗಳ ಮೂಲಕ ನಮ್ಮ ಬದುಕನ್ನು ಸಾಧಿಸಬಹುದು ಎಂಬುದನ್ನು ಪ್ರಚುರಪಡಿಸಿದರು. ಆದರೆ, ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗಿಸರು, ಡಚ್ಚರು, ಫ್ರೆಂಚರು ಕಾಲ ಕ್ರಮೇಣ ಆಡಳಿತ ನಡೆಸಲಾರಂಭಿಸಿದರು. ಹೀಗಾಗಿ, ತಾಯಿ ನಾಡಿನ ಬಿಡುಗಡೆಗಾಗಿ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಇದರ ಪರಿಣಾಮ 1947 ರಲ್ಲಿ ಸ್ವಾತಂತ್ರ್ಯ ದೊರೆಯಿತಾದರೂ ಭಾರತೀಯರಿಗೆ ಸೆಪ್ಟೆಂಬರ್ 17, 1948 ರಲ್ಲಿ ಆಪರೇಷನ್ ಪೊಲೋ ಕಾರ್ಯಚಾರಣೆಯಲ್ಲಿ ನಿಜಾಮರು ಭಾರತ ಸಂಯುಕ್ತ ಒಕ್ಕೂಟದಲ್ಲಿ ಸೇರಲು ವಿಲೀನದ ಪತ್ರಕ್ಕೆ ಸಹಿ ಹಾಕಿದಾಗ ಹಾಗೂ 1964 ರಲ್ಲಿ ಗೋವಾದಿಂದ ಪೋರ್ಚುಗಿಸರನ್ನು ವಿಮುಖಗೊಳಿಸಿದಾಗ ನಿಜವಾದ ಸ್ವಾತಂತ್ರ್ಯ ದೊರಕಿತು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಿವಮೊಗ್ಗದ ಜನಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರ ಅಧಿಕಾರಿ ಜಿ.ತುಕರಾಮಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಸಾಯಿರಬಾನು ಫಾರೂಖಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಪ್ರೊ.ಟಿ.ವೀರೇಶ್, ಜಗದೀಶ್.ಎಸ್, ಗೀತಾದೇವಿ ಟಿ., ನಿವೇದಿತಾ, ಗೌರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here