ದುಡ್ಡು ಒಟ್ಟಿಟ್ಟವರು ಮಹಾನ್ ನಾಯಕರಾಗುತ್ತಿರುವ ಕಾಲದಲ್ಲಿ..

0
108

ಅವತ್ತು ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಅವರು ಚಿತ್ರದುರ್ಗದ ಪ್ರವಾಸಿ ಮಂದಿರಕ್ಕೆ ಹೋದರು.
ಹೀಗೆ ಹೋದವರು ಅಲ್ಲಿ ಒಂದು ದಿನ ಉಳಿದುಕೊಂಡು ಸರ್ಕಾರದ ಕೆಲ ಇಲಾಖೆಗಳ ಕಡತಗಳನ್ನು ಪರಿಶೀಲಿಸಿದರು.
ಸರಿ,ಈ ಕಾರ್ಯಮುಗಿದ ನಂತರ ಅವರು ಪ್ರವಾಸಿ ಮಂದಿರದಿಂದ ವಾಪಸ್ಸಾಗಬೇಕು.ಅಷ್ಟರಲ್ಲಿ ಅವರಿಗೆ ಪ್ರವಾಸಿ ಮಂದಿರದ ಮೇಟಿಗೆ ಹತ್ತು ರೂಪಾಯಿ ಕೊಡಬೇಕು ಎನ್ನಿಸಿತು.
ಆದರೆ ಜೋಬು ತಡಕಿ ನೋಡಿದರೆ ಎಲ್ಲಿದೆ ದುಡ್ಡು? ನಿಜಲಿಂಗಪ್ಪ ಅವರ ಮನಸ್ಸು ಮುದುಡಿ ಹೋಯಿತು.ಹಾಗಂತಲೇ ಅಲ್ಲಿಗೆ ಬಂದಿದ್ದ ಪಕ್ಷದ ನಾಯಕರೊಬ್ಬರ ಬಳಿ:ಅಣ್ಣಪ್ಪ,ನಿನ್ನ ಬಳಿ ಹತ್ತು ರೂಪಾಯಿ ಇದೆಯಾ?ಅಂತ ಕೇಳಿದರು.
ನಿಜಲಿಂಗಪ್ಪ ಅವರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದ ಅಣ್ಣಪ್ಪ ಅವರ ನಿಜವಾದ ಹೆಸರು ಪಿ.ಎಂ.ನಾಡಗೌಡ.ಅವರು ನಿಜಲಿಂಗಪ್ಪ ಅವರ ಮಾತು ಕೇಳಿದ ಕೂಡಲೇ ಹತ್ತು ರೂಪಾಯಿ ತೆಗೆದುಕೊಟ್ಟರು.
ಈ ಘಟನೆಯನ್ನು ಇವತ್ತು ಏಕೆ ನೆನಪಿಸಿಕೊಳ್ಳಬೇಕೆಂದರೆ ಮುಖ್ಯಮಂತ್ರಿಯಾಗಿದ್ದ ಒಬ್ಬ ನಾಯಕ ಹತ್ತು ರೂಪಾಯಿಗೂ ಜೇಬು ತಡಕಾಡುವ ಸ್ಥಿತಿ ಇತ್ತು.ಅರ್ಥಾತ್‌,ಅದು ಆದರ್ಶದ ಕಾಲ.
ನಾವು ಜನರಿಗಾಗಿಯೇ ಬದುಕನ್ನು ಮುಡಿಪಾಗಿಡಬೇಕು ಎಂದು ಬಹುತೇಕ ರಾಜಕಾರಣಿಗಳು ಬಯಸಿದ ಕಾಲ ಅದು.ಇದು ನಿಜಲಿಂಗಪ್ಪ ಅವರ ವಿಷಯದಲ್ಲಿ ಮಾತ್ರವಲ್ಲ,ಹೇಳುತ್ತಾ ಹೋದರೆ ಇಂತಹ ಅಸಂಖ್ಯಾತ ಉದಾಹರಣೆಗಳನ್ನು ಕೊಡಬಹುದು.
ಆದರೆ ಕೆಲವೇ ದಶಕಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದು ನಿಂತಿದೆ ಎಂದರೆ ನಿಜಲಿಂಗಪ್ಪ,ಶಾಂತವೇರಿ ಗೋಪಾಲಗೌಡ,ಕಡಿದಾಳ್‌ ಮಂಜಪ್ಪ ಅವರಂತಹ ರಾಜಕಾರಣಿಗಳ ಪರಂಪರೆ ಈಗ ಮುಗಿದ ಅಧ್ಯಾಯ.
ತುಂಬ ದೂರ ಹೋಗುವುದೇನೂ ಬೇಡ.ಮೊನ್ನೆ ರಾಜ್ಯ ವಿಧಾನಪರಿಷತ್ತಿನ ಇಪ್ಪತ್ತು ಸ್ಥಾನಗಳಿಗೆ ಚುನಾವಣೆ ನಡೆಯಿತಲ್ಲ?ಈ ಚುನಾವಣೆಯಲ್ಲಿ ಸ್ಪರ್ಧಿಸಿದ ಬಹುತೇಕರು ನೂರಾರು ಕೋಟಿ ರೂಪಾಯಿಗಳ ಒಡೆಯರು.
ಇವರಲ್ಲಿ ಎಷ್ಟು ಜನ ಆದರ್ಶ ರಾಜ್ಯದ ಕನಸಿನೊಂದಿಗೆ,ಜನರಿಗಾಗಿ ರಾಜಕಾರಣ ಮಾಡಬೇಕೆಂಬ ಹುಕಿಯೊಂದಿಗೆ ಮುಂದೆ ಬಂದು ನಿಂತಿದ್ದಾರೆ?ಮತ್ತು ಇವರಲ್ಲಿ ಯಾವ ಅಂಶಗಳನ್ನು ಗಮನಿಸಿ ರಾಜಕೀಯ ಪಕ್ಷಗಳು ಚುನಾವಣೆಗೆ ಟಿಕೆಟ್‌ ನೀಡಿವೆ?
ಈ ಪ್ರಶ್ನೆಯನ್ನು ಮನಸ್ಸನಲ್ಲಿಟ್ಟುಕೊಂಡು ಮುಂದಕ್ಕೆ ಹೋದರೆ ನಿರಾಶೆ ಕಾಡುವುದು ನಿಶ್ಚಿತ.ಯಾಕೆಂದರೆ ಇವತ್ತು ವಿಧಾನಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಧನವಂತರಿಗೆ ಮಾತ್ರ ಅರ್ಹತೆ ಎಂದು ರಾಜಕೀಯ ಪಕ್ಷಗಳು ತೀರ್ಮಾನಿಸಿ ಬಹುಕಾಲವೇ ಆಗಿದೆ.
ಇದನ್ನು ಮನಸ್ಸನಲ್ಲಿಟ್ಟುಕೊಂಡು ಮುಂದಿನ ವಿಧಾನಸಭಾ ಚುನಾವಣೆಗೆ ಎಂತೆಂತವರು ಸ್ಪರ್ಧಿಸಬಹುದು ಎಂಬುದನ್ನು ಗಮನಿಸಿದರೆ ಆತಂಕವಾಗುತ್ತದೆ.
ಸಣ್ಣ ಉದಾಹರಣೆ ಗಮನಿಸಿ.ಇವತ್ತು ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ,ಗುಬ್ಬಿ ಶಾಸಕ ಶ್ರೀನಿವಾಸ್‌ ಸೇರಿದಂತೆ ಜೆಡಿಎಸ್‌ ಪಕ್ಷದ ಹಲ ಶಾಸಕರು ಪಕ್ಷದ ನಾಯಕರ ಧೋರಣೆಯಿಂದ ಮುನಿಸಿಕೊಂಡು ಬೇರೆ ಕಡೆ ಹೆಜ್ಜೆ ಹಾಕಿದ್ದಾರೆ.
ಹೀಗೆ ಬೇರೆ ಕಡೆ ಹೊರಟವರಿಗೆ ಬುದ್ದಿ ಕಲಿಸದಿದ್ದರೆ ಜೆಡಿಎಸ್‌ ನಾಯಕರಿಗೆ ಸಮಾಧಾನ ಇರಲು ಸಾಧ್ಯವೇ?ಹಾಗಂತಲೇ ಇವರ ವಿರುದ್ಧ ದುಡ್ಡು ಒಟ್ಟಟ್ಟವರನ್ನು ನಿಲ್ಲಿಸಲು ತಯಾರಿ ನಡೆಸಿದ್ದಾರೆ.
ಇವರೆಲ್ಲ ನೂರಾರು ಕೋಟಿ ರೂಪಾಯಿಗಳ ಒಡೆಯರು.ಇಂತವರು ಚುನಾವಣೆಯಲ್ಲಿ ಸ್ಪರ್ಧಿಸುವುದು ವಿಚಾರದ ಶಕ್ತಿಯಿಂದಲೋ,ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಆದರ್ಶದಿಂದಲೋ ಅಲ್ಲ.
ಬದಲಿಗೆ ತಮಗಿರುವ ಬಲವನ್ನು ಬಳಸಿ ಜಿ.ಟಿ.ದೇವೇಗೌಡ,ಶ್ರೀನಿವಾಸ್‌ ತರದ ನಾಯಕರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಬೇಕು.ಆನಂತರ ತಮ್ಮ ಸಾಮ್ರಾಜ್ಯವನ್ನು ಇನ್ನಷ್ಟು ಎತ್ತರಕ್ಕೇರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ.
ಒಂದು ಕಾಲದಲ್ಲಿ ಒಳ್ಳೆಯವರ ವಿರುದ್ಧ ಇನ್ನೂ ಒಳ್ಳೆಯವರನ್ನು ತಂದು ನಿಲ್ಲಿಸುವ ಪರಿಪಾಠವಿತ್ತು.ಆದರೆ ಈಗ ಒಬ್ಬರ ವಿರುದ್ಧ ಅವರಿಗಿಂತ ಹೆಚ್ಚು ಧನಬಲವುಳ್ಳವರನ್ನು ತಂದು ನಿಲ್ಲಿಸುವುದೇ ಏಕೈಕ ಮಂತ್ರ.
ಪರಿಣಾಮ?ಮುಂದಿನ ದಿನಗಳಲ್ಲಿ ರಾಜಕೀಯ ಎಂಬುದು ರಾಜಕೀಯೋದ್ಯಮವಾಗಿ ಬದಲಾಗುತ್ತದೆ.ಅರ್ಥಾತ್‌,ಇನ್ನು ಮುಂದೆ ರಾಜಕಾರಣಕ್ಕೆ ಬರುವವರಿಗೆ ಉಪದೇಶಿಸಲ್ಪಡುವ ಮೂಲ ನೀತಿ ಎಂದರೆ,ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಲು ಸಿದ್ಧರಿದ್ದರೆ ನೀವು ರಾಜಕೀಯಕ್ಕೆ ಬನ್ನಿ.ಇಲ್ಲದಿದ್ದರೆ ನಿಮ್ಮ ಆಸೆಯನ್ನು ಮರೆತು ಬಿಡಿ ಎಂಬುದು.
ಇಂತಹ ಪರಿಸ್ಥಿತಿಯಲ್ಲಿ ಜನಸೇವೆ ಮಾಡಲು ಬರುತ್ತೇನೆ ಎಂಬುದಕ್ಕಿಂತ ಹಾಸ್ಯಾಸ್ಪದ ಸಂಗತಿ ಬೇರೊಂದಿರಲು ಸಾಧ್ಯವೇ?ರೈತರಿಗಾಗಿ ನನ್ನ ಬದುಕು ಎಂದು ಉನ್ನತ ಹುದ್ದೆಗೇರಿದ ನಾಯಕರೊಬ್ಬರು ಅದೆಷ್ಟೋ ಸಾವಿರ ಕೋಟಿ ರೂಪಾಯಿಗಳನ್ನು ಬಾಚಿದ ಉದಾಹರಣೆ ಇತ್ತೀಚಿನದು.
ಇಂತವರನ್ನು ರೋಲ್‌ ಮಾಡೆಲ್‌ಗಳಾಗಿಟ್ಟುಕೊಳ್ಳದಿದ್ದರೆ ನಾವು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಎಂಬ ಮನ:ಸ್ಥಿತಿ ಎಲ್ಲರಲ್ಲಿ ಬೆಳೆದರೆ ಗತಿ ಏನು?
ದಿನನಿತ್ಯದ ಬದುಕು ದುಬಾರಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ದೊಡ್ಡ ಪ್ರಮಾಣದ ಜನಸಮುದಾಯ ಅನಿವಾರ್ಯವಾಗಿ ದುಡ್ಡಿಗಾಗಿ ಕಾತರಿಸುತ್ತದೆ.ಅಂತಹ ಕಾತರಿಕೆ ಇರುವವರ ಕಣ್ಣಿಗೆ ಸಾವಿರಾರು ಕೋಟಿ ಗಳಿಸಿರುವವರೇ ಮಹಾನ್ ನಾಯಕರಂತೆ ಕಂಡರೆ ಅದರಲ್ಲಿ ಅಚ್ಚರಿ ಏನಿದೆ?

ಆರ್.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here