ಸರ್ಕಾರದ ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಜವಾಬ್ದಾರಿ ಮಹತ್ವದ್ದು ಎಚ್.ವಿ. ಶಿವಶಂಕರ್

0
88

ಧಾರವಾಡ .ಆ.19: ಸರ್ಕಾರವು ಎಲ್ಲರಿಗೂ ಆಹಾರ ಭದ್ರತೆ, ಮಕ್ಕಳ ಪೌಷ್ಠಿಕ ಮಟ್ಟ ಸುಧಾರಣೆ ಮತ್ತಿತರ ಮಹತ್ವಾಕಾಂಕ್ಷೆಯೊಂದಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ವಿ. ಶಿವಶಂಕರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಗಸ್ಟ್ 16 ರಿಂದ ನಿನ್ನೆ ಆ.18 ರ ವರೆಗೆ ಜಿಲ್ಲೆಯ ವಿವಿಧ ನ್ಯಾಯಬೆಲೆ ಅಂಗಡಿಗಳು, ಅಂಗನವಾಡಿ ಕೇಂದ್ರಗಳು, ಆಹಾರ ಗೋದಾಮುಗಳು, ಜಿಲ್ಲಾಸ್ಪತ್ರೆಯ ಎನ್‍ಆರ್‍ಸಿ ಘಟಕ, ಮಧ್ಯಾಹ್ನ ಬಿಸಿಯೂಟ ಯೋಜನೆಯ ಘಟಕಗಳು ಸೇರಿದಂತೆ ವಿವಿಧ 22 ಕಡೆ ಅನಿರೀಕ್ಷಿತ ಭೇಟಿಗಳನ್ನು ನೀಡಲಾಗಿದೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ಕಾರ್ಯ ತೃಪ್ತಿಕರವಾಗಿದೆ. ಯಾವೊಬ್ಬ ವ್ಯಕ್ತಿಯೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದೊಂದಿಗೆ 2013 ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಲಾಗಿದೆ. ಅದುವರೆಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮವಾಗಿದ್ದ ಪಡಿತರ ವಿತರಣೆ ಈ ಕಾಯ್ದೆಯ ಜಾರಿ ನಂತರ ಪ್ರತಿಯೊಬ್ಬರ ಕಾನೂನಾತ್ಮಕ ಹಕ್ಕಾಗಿ ಪರಿಣಮಿಸಿದೆ. 2017 ರಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗ ರಚನೆಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಲಾಗಿದೆ ಎಂದರು.

ಅಕ್ಷರ ದಾಸೋಹ ಯೋಜನೆಯ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮ ಪರಿಶೀಲಿಸಲು ನಾಲ್ಕು ಶಾಲೆಗಳಿಗೆ ಭೇಟಿ ನೀಡಲಾಗಿದೆ. ಆಹಾರ ಪೂರೈಸುವ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದ ಪತ್ರ

(ಎಂಓಯು) ನವೀಕರಣ ಮಾಡಿಕೊಳ್ಳಲು ಸೂಚಿಸಲಾಗಿದೆ. ಜಿಲ್ಲೆಯ ಅಂಗನವಾಡಿಗಳಿಗೆ ಆಹಾರ ಧಾನ್ಯ ಪೂರೈಸುವ ಎಂಎಸ್‍ಪಿಟಿಸಿ ಸಂಸ್ಥೆಗಳ ಕಾರ್ಯ ತೃಪ್ತಿ ತಂದಿಲ್ಲ. ಈ ಸಂಸ್ಥೆಗಳು ಸಕಾಲದಲ್ಲಿ ಆಹಾರಧಾನ್ಯ ಪೂರೈಸುತ್ತಿಲ್ಲ. ನವಲಗುಂದದ ಎಂಎಸ್‍ಪಿಟಿಸಿ ಯಲ್ಲಿ ತೂಕದ ಮಾಪನಗಳಿಗೆ ಅಧಿಕೃತ ಮುದ್ರೆಗಳೇ ಇಲ್ಲದಿರುವುದನ್ನು ಗಮನಿಸಿ ಸಂಬಂಧಿಸಿದ ಇಲಾಖೆಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.

ಅನರ್ಹ ಪಡಿತರ ಚೀಟಿ ಹೊಂದಿದ್ದ ನೌಕರರಿಂದ 5 ಲಕ್ಷ 78 ಸಾವಿರ ರೂ.ಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಿರುವುದು ಶ್ಲಾಘನೀಯ ಎಂದರು.

ಆಯೋಗದ ಸದಸ್ಯ ಡಿ.ಜಿ. ಹಸಬಿ ಮಾತನಾಡಿ, ಜಿಲ್ಲೆಯ ಆಹಾರ ಇಲಾಖೆ ಹಾಗೂ ಆಹಾರ ನಿಗಮದ ಉಗ್ರಾಣಗಳನ್ನು ಪರಿಶೀಲಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ಇದೆ. ಗ್ರಾಹಕರಿಗೆ ಪೂರೈಸುವ ಪಡಿತರದ ವಿವರಗಳನ್ನು ಮತ್ತು ಜಾಗೃತಿ ಸಮಿತಿ ಸದಸ್ಯರ ಮಾಹಿತಿಯನ್ನು ಎಲ್ಲಾ ಪಡಿತರ ಅಂಗಡಿಗಳಲ್ಲಿ ಪ್ರದರ್ಶಿಸಬೇಕು ಎಂದರು.

ಇನ್ನೋರ್ವ ಸದಸ್ಯೆ ಮಂಜುಳಾಬಾಯಿ ಸಾತನೂರ ಮಾತನಾಡಿ, ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಗರ್ಭಿಣಿಯರು, ತಾಯಂದಿರು ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯ ಗಮನಿಸಲಾಗಿದೆ. ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಕಾರ್ಯ ಆಗಬೇಕು ಎಂದರು.

ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿನಿರ್ದೇಶಕ ವಿನಾಯಕ ಪಾಲನಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ:ಎಚ್.ಎಚ್. ಕುಕನೂರ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ಯಶವಂತ ಮದೀನಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಶಿವಕುಮಾರ ಮಾನಕರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಅಹವಾಲು ಸ್ವೀಕಾರ : ಸಭೆಯ ನಂತರ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಸಾರ್ವಜನಿಕರಿಂದ ಪಡಿತರ ವಿತರಣೆ, ಪಡಿತರ ಚೀಟಿ, ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ಹಾಗೂ ಮತ್ತಿತರರ ವಿಷಯಗಳ ಅಹವಾಲುಗಳನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here