ಬಳ್ಳಾರಿಯಲ್ಲಿ ಸಂಭ್ರಮದ 75 ನೇ ಸ್ವಾತಂತ್ರೋತ್ಸವ ದಿನ ಆಚರಣೆ,ಸವಾಲುಗಳ ಮಧ್ಯೆಯೂ ಅಭಿವೃದ್ಧಿಯತ್ತ ಅವಿಭಜಿತ ಬಳ್ಳಾರಿ:ಡಿಸಿ ಮಾಲಪಾಟಿ

0
97

ಬಳ್ಳಾರಿ,ಆ.14 : ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿದ ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೇರಿದಂತೆ ಅನೇಕ ಸವಾಲುಗಳು ಮಧ್ಯೆಯೂ ವಿವಿಧ ಇಲಾಖೆಗಳ ಮೂಲಕ ಅಭಿವೃದ್ಧಿಯ ಹೆಜ್ಜೆಗಳನ್ನು ದಾಖಲಿಸುತ್ತ ಜಿಲ್ಲೆ ಮುನ್ನಡೆದಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹೇಳಿದರು.
75ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಪಥ ಸಂಚಲನ ವೀಕ್ಷಿಸಿ ಮತ್ತು ಗೌರವ ಸ್ವೀಕರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ಕೃಷಿ ಇಲಾಖೆಯ ಮೂಲಕ 2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 244 ಮಿ.ಮೀ. ಮಳೆಯಾಗಿಬೇಕಾಗಿದ್ದು, ವಾಸ್ತವವಾಗಿ 301 ಮಿ.ಮೀ. ಮಳೆಯಾಗಿರುತ್ತದೆ. ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆಯಾಗುತ್ತಿದ್ದು, ಇಲ್ಲಿಯವರೆಗೂ 2,26,784 ಹೆಕ್ಟೇರ್‍ಗಳ ಪ್ರದೇಶದಲ್ಲಿ ಶೇ. 73 ರಷ್ಟು ಬಿತ್ತನೆಯಾಗಿರುತ್ತದೆ. ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗಳಿಗೆ ನೀರು ಬಿಟ್ಟಿರುವುದರಿಂದ ಭತ್ತ ನಾಟಿ ಕಾರ್ಯವು ಪ್ರಗತಿಯಲ್ಲಿದೆ ಎಂದರು.
2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಪೂರೈಕೆ ವಿತರಣೆಯಲ್ಲಿ ಒಟ್ಟು 12,830 ಕ್ಟಿಂಟಾಲ್‍ಗಳ ಕಾರ್ಯಕ್ರಮ ಗುರಿಯಿದ್ದು, ಸದರಿ ಹಂಗಾಮಿನಲ್ಲಿ 12,711 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ 64,825 ರೈತರಿಗೆ ವಿತರಿಸಲಾಗಿದೆ ಎಂದರು.
*ನರೇಗಾದಲ್ಲಿ ಬಳ್ಳಾರಿ 2ನೇ ಸ್ಥಾನ: ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ 2021-22 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 4564 ಹೆಕ್ಟೇರ್ ಪ್ರದೇಶದಲ್ಲಿ ಕಂದಕ ಬದು ನಿರ್ಮಾಣ ಹಾಗೂ 200 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 4,31,157 ಮಾನವ ದಿನಗಳನ್ನು ಸೃಜಿಸಿ ಆರ್ಥಿಕ ಒಟ್ಟು ರೂ. 1222 ಲಕ್ಷಗಳ ವೆಚ್ಚವನ್ನು ಭರಿಸಿ ರಾಜ್ಯದಲ್ಲಿ 2 ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿವರಿಸಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ 2021-22 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 1,18,078 ರೈತರಿಗೆ ರೂ. 180 ಕೋಟಿ ವರ್ಗಾವಣೆಯಾಗಿರುತ್ತದೆ. ಕರ್ನಾಟಕ ಸರ್ಕಾರದಿಂದ ಪಿ.ಎಂ.ಕಿಸಾನ್ ಯೋಜನೆಯಡಿ ಎರಡನೇ ಕಂತಿನ ಅನುದಾನವನ್ನು 1,11,640 ರೈತರಿಗೆ ರೂ. 46 ಕೋಟಿಗಳ ಅನುದಾನವು ವರ್ಗಾವಣೆಯಾಗಿದೆ ಎಂದು ಅವರು ತಿಳಿಸಿದರು.
*ಕೋವಿಡ್ 2ನೇ ಅಲೆ ಸಮರ್ಪಕ ನಿರ್ವಹಣೆ: ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್-19ರ 2 ನೇ ಅಲೆಯನ್ನು ಸಮರ್ಥವಾಗಿ ನಿಯಂತ್ರಿಸುವಲ್ಲಿ 3 ಕೋವಿಡ್ ಡಿ.ಸಿ.ಹೆಚ್, 11 ಡಿ.ಸಿ.ಹೆಚ್.ಸಿ , 09 ಖಾಸಗಿ ಡಿ.ಸಿ.ಹೆಚ್. 367 ಸಾಮಾನ್ಯ ಬೆಡ್‍ಗಳು, 1938 ಆಕ್ಸಿನೇಟೆಡ್ ಬೆಡ್‍ಗಳು, 103 ಐ.ಸಿ.ಯು ವೆಂಟಿಲೇಟರ್ ರಹಿತ ಬೆಡ್‍ಗಳು ಹಾಗೂ 118 ಐ.ಸಿ.ಯು ವೆಂಟಿಲೇಟರ್ ಬೆಡ್‍ಗಳು ಹೀಗೆ ಒಟ್ಟು 2526 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಲಪಾಟಿ ಅವರು ವಿವರಿಸಿದರು.
ಜಿಲ್ಲೆಯಲ್ಲಿ ಹರಡಿರುವ ಕೋವಿಡ್ – 19 ರ 2 ನೇ ಅಲೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ತೋರಣಗಲ್ಲಿನಲ್ಲಿ ಜೆ.ಎಸ್.ಡಬ್ಲ್ಯೂ ಸ್ಟೀಲ್ ವಕ್ರ್ಸ್‍ರವರ ಸಹಕಾರದೊಂದಿಗೆ 1 ಸಾವಿರ ಹಾಸಿಗೆಗಳ ಆಕ್ಸಿಜನ್ ಸೌಲಭ್ಯ ಹೊಂದಿರುವ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 10,45,327 ಜನರಿಗೆ ಕೋವಿಡ್ ಲಸಿಕೆ ಹಾಕುವ ಗುರಿಯಿದ್ದು, ಇದರಲ್ಲಿ 4,52,466 ಮೊದಲನೆಯ ಡೋಸ್ ಹಾಗೂ 1,31,638 ಎರಡನೆಯ ಡೋಸ್ ಹೀಗೆ ಒಟ್ಟು 5,59,570 ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಎಂದರು.
ಕೋವಿಡ್ 2ನೇ ಅಲೆಯಲ್ಲಿ ಉಂಟಾದ ಉಸಿರಾಟದ ತೊಂದರೆಯ ಪ್ರಕರಣಗಳನ್ನು ನಿಭಾಯಿಸಲು ಜಿಲ್ಲಾ ಆಸ್ಪತ್ರೆಗಳಲ್ಲಿ 6000 ಲೀಟರ್, ವಿಮ್ಸ್‍ನಲ್ಲಿ 4 ಘಟಕಗಳಮೂಲಕ 38,000 ಲೀಟರ್ ಆಕ್ಸಿಜನ್ ಪ್ಲ್ಯಾಂಟ್‍ಗಳನ್ನು ಸ್ಥಾಪಿಸಲಾಗಿದೆ ಎಂದರು.
*ಕೋವಿಡ್ 3ನೇ ನಿಭಾಯಿಸಲು ಸಕಲ ಸಿದ್ಧತೆ: ಕೋವಿಡ್ 19 ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲೆಯಾದ್ಯಂತ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿವರಿಸಿದರು.
ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
*ಜಿಲ್ಲಾ ಖನಿಜ ನಿಧಿ ಅಡಿ ಬಳ್ಳಾರಿ ಸಮಗ್ರ ಅಭಿವೃದ್ಧಿ: ಜಿಲ್ಲಾ ಖನಿಜ ನಿಧಿಯ ಅನುದಾನವನ್ನು ಬಳಸಿಕೊಂಡು ಅವಿಭಜಿತ ಬಳ್ಳಾರಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಲಪಾಟಿ ಅವರು ಹೇಳಿದರು.
ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲಕ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 2015-16 ನೇ ಸಾಲಿನಿಂದ ಈವರೆಗೂ 1,635.94 ಕೋಟಿ ರೂಪಾಯಿಗಳು ಸಂಗ್ರಹವಾಗಿರುತ್ತವೆ. ಸದರಿ ಸಂಗ್ರಹವಾದ ಮೊತ್ತದಲ್ಲಿ 6 ಕ್ರಿಯಾ ಯೋಜನೆಗಳನ್ನು ತಯಾರಿಸಲಾಗಿದ್ದು, ಸದರಿ ಕ್ರಿಯಾ ಯೋಜನೆಯ ಒಟ್ಟು ಮೊತ್ತ 2,222.15 ಕೋಟಿಗಳಾಗಿರುತ್ತದೆ. ಸದರಿ ಕ್ರಿಯಾ ಯೋಜನೆಯಲ್ಲಿ ಹೆಚ್ಚಿನ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದ್ದು, ಅನುಮೋದಿತ ಎಲ್ಲಾ ಕಾಮಗಾರಿಗಳು ಪ್ರಗತಿ ಹಂತದಲ್ಲಿರುತ್ತವೆ. ಈವರೆಗೂ ಒಟ್ಟಾರೆಯಾಗಿ 2321 ಕಾಮಗಾರಿಗಳಿಗೆ ಅನುಮೋದನೆಯನ್ನು ನೀಡಲಾಗಿದ್ದು, ಇದರಲ್ಲಿ 601 ಕಾಮಗಾರಿಗಳು ಮುಕ್ತಾಯಗೊಂಡಿದ್ದು, 604 ಕಾಮಗಾರಿಗಳೂ ಪ್ರಗತಿಯಲ್ಲಿರುತ್ತವೆ. ಈ ಎಲ್ಲಾ ಕಾಮಗಾರಿಗಳಿಗೆ ಈ ವರೆಗೆ ಒಟ್ಟಾರೆಯಾಗಿ 496.77 ಕೋಟಿಗಳ ಅನುದಾನವನ್ನು ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.
ಖನಿಜ ಪ್ರತಿಷ್ಠಾನ ವತಿಯಿಂದ ಕೌಶಲ್ಯಾಭಿವೃದ್ದಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೌಶಲ್ಯಾಭಿವೃದ್ದಿ ವಲಯದಲ್ಲಿ ನಿರುದ್ಯೋಗಿ ಯುವಕ/ ಯುವತಿಯರಿಗೆ ಆರ್ಥಿಕವಾಗಿ ಸ್ವಾವಲಂಭಿಯಾಗಲು ಸÀಂಡೂರು ತಾಲೂಕಿನ 26 ಗ್ರಾಮ ಪಂಚಾಯತಿಗಳಲ್ಲಿ ಒಟ್ಟಾರೆಯಾಗಿ 5500 ನಿರುದ್ಯೋಗಿ ಯುವಕ/ ಯುವತಿಯರಿಗೆ ಕೌಶಲ್ಯ ತರಬೇತಿಗಳು ನೀಡುವ ಸಂಬಂಧ ಸಂಡೂರು ಸ್ವಯಂ-ಶಕ್ತಿ ಹೆಸರಲ್ಲಿ ಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸಲಾಗಿರುತ್ತದೆ. ಸದರಿ ಯೋಜನೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಈ ಯೋಜನೆಯಲ್ಲಿ ಮೇಸನ್ ತರಬೇತಿ, ಬೇಸಿಕ್ ಎಲೆಕ್ಟ್ರಿಕಲ್ ರಿಪೇರ್ & ಸರ್ವಿಸಿಂಗ್ ತರಬೇತಿ, ಭಾರಿ ವಾಹನ ಚಾಲನಾ ತರಬೇತಿಯನ್ನು ಏರ್ಪಡಿಸಲಾಗಿರುತ್ತದೆ. ಸದರಿ ಯೋಜನೆಗೆ ರಾಷ್ಟ್ರೀಯ ಮಟ್ಟದಲ್ಲಿ ನೀಡಲಾಗುವ ಸ್ಕಾಚ್ ಅವಾರ್ಡ್‍ನಲ್ಲಿ ಬೆಳ್ಳಿ ಪದಕ ಶ್ರೇಣಿಯಲ್ಲಿ ಪ್ರಶಸ್ತಿ ಲಭಿಸಿದೆ ಎಂದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮೂಲಕ ನಿಯಮಿತ ಪಡಿತರದ ಜೊತೆಗೆ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಮೇ-2021ರ ಮಾಹೆಯಿಂದ ನವೆಂಬರ್-2021 ರ ಮಾಹೆವರೆಗೆ ಅಂತ್ಯೋದಯ ಅನ್ನ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಆದ್ಯತಾ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ಹಂಚಿಕೆ ಮಾಡಲಾಗಿದೆ. ಈ ಮೂಲಕ ಕೋವಿಡ್ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಕೆಲಸವನ್ನು ಸರಕಾರ ಮಾಡಿದೆ ಎಂದರು.
*ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಪರಿಹಾರ ವಿತರಣೆ: ಕಾರ್ಮಿಕ ಇಲಾಖೆ ಮೂಲಕ ಕೋವಿಡ್ ಹಿನ್ನೆಲೆಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ ರೂ.5 ಸಾವಿರಗÀಳಂತೆ 23100 ಕಾರ್ಮಿಕರಿಗೆ 11 ಕೋಟಿ ಪರಿಹಾರವನ್ನು ನೀಡಲಾಗಿದೆ ಹಾಗೂ 2ನೇ ಅಲೆಯ ಹಿನ್ನೆಲೆಯಲ್ಲಿ ರೂ.3ಸಾವಿರಗಳಂತೆ 25 ಸಾವಿರ ಕಾರ್ಮಿಕರಿಗೆ 7 ಕೋಟಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿವರಿಸಿದರು.
4493 ಮಡಿವಾಳರು ಮತ್ತು ಕ್ಷೌರಿಕರಿಗೆ ಪ್ರತಿಯೋಬ್ಬರಿಗೆ ರೂ5 ಸಾವಿರಗಳಂತೆ ಒಟ್ಟು ರೂ.2.25 ಕೋಟಿ ಪರಿಹಾರವನ್ನು ನೀಡಲಾಗಿದೆ ಹಾಗೂ ಅಸಂಘಟಿತ 11 ವಲಯದ 6181 ಕಾರ್ಮಿಕರಿಗೆ ಪ್ರತಿಯೊಬ್ಬರಿಗೆ ರೂ.2ಸಾವಿರಗಳಂತೆ ಒಟ್ಟು ರೂ.1.75 ಕೋಟಿ ಪರಿಹಾರವನ್ನು ನೀಡೆಲಾಗಿದೆ. ಇದಲ್ಲದೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ ಅಡಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 5000 ಸುರಕ್ಷ ಹಾಗೂ ನೈರ್ಮಾಲ್ಯೀಕರಣ ಕಿಟ್‍ಗಳನ್ನು ವಿತರಿಸಲಾಗಿದೆ ಹಾಗೂ 25710 ಆಹಾರ ಕಿಟ್‍ಗಳನ್ನು ವಿತರಿಸಲಾಗಿದೆ ಎಂದರು.
*ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಈ ಇಲಾಖೆಯ ಮೂಲಕ ಪೂರಕ ಪೌಷ್ಠಿಕ ಆಹಾರ ವಿತರಣೆಗಾಗಿ ಪೌಷ್ಠಿಕ ಆಹಾರ ಯೋಜನೆ ಅಡಿಯಲ್ಲಿ ರೂ, 2500.00 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು ರೂ.1257.65 ಲಕ್ಷಗಳ ಅನುದಾನ ವೆಚ್ಚ ಭರಿಸಲಾಗಿದೆ. ಜಿಲ್ಲೆಯಲ್ಲಿ ಜುಲೈ-21 ರ ಅಂತ್ಯಕ್ಕೆ ಒಟ್ಟು 370 ಅಪೌಷ್ಠಿಕ ಮಕ್ಕಳಿದ್ದು ಅಪೌಷ್ಠಿಕ ಮಕ್ಕಳನ್ನು ಪೌಷ್ಠಿಕ ಮಟ್ಟಕ್ಕೆ ತರಲು ಬಾಲಚೈತನ್ಯ ಯೋಜನೆಯನ್ನು ಜಿಲ್ಲೆಯಾದ್ಯಂತ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಲಪಾಟಿ ಅವರು ವಿವರಿಸಿದರು.
ಭಾಗ್ಯಲಕ್ಷ್ಮಿ ಯೋಜನೆಯಡಿ ಪ್ರಾರಂಭದಿಂದ 2006-07ನೇ ಸಾಲಿನಿಂದ 2021-22 ನೇ ಸಾಲಿನ ಜುಲೈ-21 ರ ಅಂತ್ಯಕ್ಕೆ 72157 ಫಲಾನುಭವಿಗಳಿಗೆ ಮಂಜೂರಾತಿ ನೀಡಿ 66813 ಬಾಂಡ್ ವಿತರಿಸಲಾಗಿದೆ. ಉಳಿದ 5344 ಬಾಂಡ್ ಎಲ್.ಐ.ಸಿ ಯಿಂದ ಬಾಂಡ್‍ಗಳು ಬರಬೇಕಾಗಿದೆ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಸೆಪ್ಟಂಬರ್-2017 ರಿಂದ ಅನುಷ್ಠಾನಗೊಂಡಿದ್ದು, ಪ್ರತಿ ಮೊದಲನೇ ಗರ್ಭೀಣಿ ಫಲಾನುಭವಿಗಳಿಗೆ ರೂ.5000/- ರಂತೆ ಮೂರು ಹಂತದಲ್ಲಿ ಹಣ ಮಂಜೂರು ಮಾಡಲಾಗುತ್ತಿದ್ದು, ಸದರಿ ಯೋಜನೆಯಡಿ 37640 ಫಲಾನುಭವಿಗಲು ಆನ್‍ಲೈನ್‍ನಲ್ಲಿ ನೊಂದಣೆಯಾಗಿದ್ದು, 27863 ಫಲಾನುಭವಿಗಳು ಯೋಜನೆ ಸೌಲಭ್ಯವನ್ನು ಪಡೆದಿದ್ದಾರೆ ಎಂದರು.
*ಅರಣ್ಯ ಇಲಾಖೆಯಿಂದ ಸಸ್ಯೋದ್ಯಾನ ನಿರ್ಮಾಣ: ಅರಣ್ಯ ಇಲಾಖೆಯ ಮೂಲಕ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದೊಂದಿಗೆ ಸಂಡೂರು ಪಟ್ಟಣದ ಸ್ಕಂದ ಕಾಲೋನಿಯಲ್ಲಿ, ಬಳ್ಳಾರಿ ತಾಲ್ಲೂಕಿನ ಮೋಕದಲ್ಲಿ ಒಂದೊಂದು ಸಸ್ಯೋಧ್ಯಾನ ನಿರ್ಮಾಣ ಮಾಡಲಾಗುತ್ತಿದೆ ಎಂದು ಡಿಸಿ ಮಾಲಪಾಟಿ ಅವರು ವಿವರಿಸಿದರು.
ಪ್ರಸಕ್ತ ಸಾಲಿನ ಜುಲೈ 2021ರ ಅಂತ್ಯದ ವರೆಗೆ ಒಟ್ಟು ರೂ.10 ಕೋಟಿ ರಾಜಸ್ವವನ್ನು ಸಂಗ್ರಹಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಮೂಲಕ ಪ್ರಥಮ ಪ್ರಯತ್ನದಲ್ಲಿ ದ್ವಿತೀಯ ಪಿ.ಯು.ಸಿ/ಡಿಪ್ಲೋಮಾದಲ್ಲಿ ಪಾಸಾದಾ ವಿದ್ಯಾರ್ಥಿಗಳಿಗೆ 20,000/-ಗಳಂತೆ, ಪದವಿ ಪಾಸಾದ ವಿದ್ಯಾರ್ಥಿಗಳಿಗೆ 25,000/-ಗಳಂತೆ, ಸ್ನಾತಕೋತ್ತರ ಪದವಿ ಪಾಸಾದ ವಿದ್ಯಾರ್ಥಿಗಳಿಗೆ 30,000/-ಗಳಂತೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ 35,000/-ಗಳಂತೆ ಸಹಾಯಧನ ನೀಡಲಾಗುತ್ತಿದ್ದು, 2020-21 ನೇ ಸಾಲಿನಲ್ಲಿ 1348 ವಿದ್ಯಾರ್ಥಿಗಳಿಗೆ ರೂ.194 ಲಕ್ಷಗಳ ಪ್ರೋತ್ಸಾಹ ಧನ ನೀಡಲಾಗಿದೆ. ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹಧನ ಯೋಜನೆಯಡಿ 2020-21ನೇ ಸಾಲಿನಲ್ಲಿ 41 ದೇವದಾಸಿ ಮಕ್ಕಳ ವಿವಾಹ ದಂಪತಿಗಳಿಗೆ ರೂ.170 ಲಕ್ಷಗಳ ಸಹಾಯಧನ ನೀಡಲಾಗಿದೆ ಎಂದು ಅವರು ವಿವರಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ 1100 ಕಲಾವಿದರಿಗೆ ಒಟ್ಟು 22 ಲಕ್ಷ ರೂಗಳ ಸಹಾಯಧನ ನೀಡಲಾಗಿದೆ. ಸ್ವತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸುವ ಹಿನ್ನಲೆಯಲ್ಲಿ ಅಜಾಧಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಹಿಂದುಳಿ ವರ್ಗಗಳ / ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ 2020-21 ನೇ ಸಾಲಿಗೆ ರೂ.85.91 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ರೂ.85.91 ಲಕ್ಷಗಳನ್ನು ಖರ್ಚು ಮಾಡಲಾಗಿದೆ ಎಂದರು.
ನಗರ ಸ್ಥಳಿಯ ಸಂಸ್ಥೆಗಳ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ನಿರಾಶ್ರಿತರಿಗೆ ಜಿಲ್ಲೆಯ ಎಲ್ಲಾ ಇಂದಿರಾ ಕ್ಯಾಂಟಿನ್‍ಗಳಿಂದ ಒಂದು ತಿಂಗಳವರೆಗೆ ಅಂದರೆ ದಿನಾಂಕ:11.05.2021 ರಿಂದ 13.06.2021 ರ ವರಗೆ ಸುಮಾರು 355040 ಊಟ ಹಾಗೂ ಉಪಹಾರಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಡಿಸಿ ಮಾಲಪಾಟಿ ಅವರು ವಿವರಿಸಿದರು.
ಸ್ವಚ್ಛ ಭಾರತ್ ಮಿಷನ್ (ನಗರ) ಯೋಜನೆ ಅಡಿಯಲ್ಲಿ ರೂ. 7.50 ಕೋಟಿಗಳ ವೆಚ್ಚದಲ್ಲಿ ವಾಹನ ಮತ್ತು ಯಂತ್ರೋಪಕರಣಗಳನ್ನು ಖರೀದಿಸಿ ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಶೇ.100 ರಷ್ಟು ಮನೆ ಮನೆ ಕಸ ಸಂಗ್ರಹಣೆ, ಶೇ.100 ರಷ್ಟು ಮೂಲದಲ್ಲಿ ತ್ಯಾಜ್ಯ ಬೇರ್ಪಡಿಸುವಿಕೆ ಹಾಗೂ ಶೇ.100 ರಷ್ಟು ತ್ಯಾಜ್ಯ ಸಂಸ್ಕರಣೆಯನ್ನು ಕೈಗೊಂಡು ಜಿಲ್ಲೆಯನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಶ್ರಮವಹಿಸಲಾಗುತ್ತಿದೆ ಎಂದರು.
ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 309 ಬಿ ಅನ್ವಯ ಎಲ್ಲಾ ಗ್ರಾಮ ಪಂಚಾಯತಿಗಳ ವತಿಯಿಂದ ಗ್ರಾಮ ಪಂಚಾಯತಿಗಳು ತಯಾರಿಸುವ ದೂರ ದೃಷ್ಟಿ ಯೋಜನೆಗಳನ್ನು “ಜನರ ಯೋಜನೆ” ಎಂಬ ಹೆಸರಿನಲ್ಲಿ ಜಾರಿಗೊಳಿಸಲು ನಮ್ಮ ಸರ್ಕಾರ ಉದ್ದೇಶಿಸಿದೆ ಎಂದು ಅವರು ತಿಳಿಸಿದರು.
2019 ರಲ್ಲಿ ವಿಶ್ವದಾದ್ಯಂತ ಹರಡಿದ ಕೋವಿಡ್ 19 ಸಾಂಕ್ರಾಮಿಕ ರೋಗ 2020 ರ ಮಾರ್ಚ್‍ನಿಂದ ಬಳ್ಳಾರಿ ಜಿಲ್ಲೆಗೂ ಕೂಡ ಅವರಿಸಿ ಅಂದಿನಿಂದ ಇಲ್ಲಿಯವರೆಗೂ ನಿರಂತರವಾಗಿ ಕಾಡಿದ 1 ಮತ್ತು 2 ನೇ ಅಲೆ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿ ಮಾಡಿ ಹಲವು ಸಂಕಷ್ಟಗಳನ್ನುಂಟು ಮಾಡಿದ್ದಲ್ಲದೇ ಕೆಲವು ಜನರು ಪ್ರಾಣವನ್ನು ಕಳೆದುಕೊಳ್ಳುವಂತೆ ಮಾಡಿತು. ಇಂತಹ ಆತಂಕಕಾರಿ ಸನ್ನಿವೇಶದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ವೈದ್ಯಾಧಿಕಾರಿಗಳು, ಸಂಘಸಂಸ್ಥೆಗಳು, ಸ್ವಯಂ ಸೇವಕರು, ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ಉದ್ದಿಮೆದಾರರು ಜಿಲ್ಲೆಯ ಜನರಲ್ಲಿ ಆತ್ಮಸ್ಥೈರ್ಯ ತುಂಬುವುದರೊಂದಿಗೆ ಕೋವಿಡ್ ಸಮರ್ಥವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕೈ ಜೋಡಿಸಿದ ಎಲ್ಲರಿಗೂ ಜಿಲ್ಲಾಡಳಿತ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದರು.
ಕರೋನಾದಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವಾನವನ್ನು ತಿಳಿಸಬಯಸುತ್ತದೆ. ಮುಂಬರುವ ದಿನಗಳಲ್ಲಿ ಕೋವಿಡ್ ಮೂರನೇ ಅಲೆಯು ಹರಡುವ ಮುನ್ನಚ್ಚರಿಕೆಯನ್ನು ತಜ್ಞರು ನೀಡಿರುವುದರಿಂದ ಹಿಂದಿನಂತೆಯೇ ಜಿಲ್ಲಾಡಳಿತಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ. 3 ನೇ ಅಲೆಯು ಸೃಷ್ಠಿ ಮಾಡಬಹುದಾದ ಸನ್ನಿವೇಶವನ್ನು ಸಮರ್ಥವಾಗಿ ನಿರ್ವಹಿಸಲು ತಾವೆಲ್ಲರೂ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದ ಅವರು ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯೊಲು ಕಂಕಣಬದ್ಧರಾಗಿರೋಣ. ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಣಿಯಾಗೋಣ ಎಂದರು.
ಇದಕ್ಕೂ ಮುಂಚೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಎಚ್.ಆರ್.ಗವಿಯಪ್ಪ ವೃತ್ತದಲ್ಲಿರುವ 150 ಅಡಿ ಎತ್ತರದ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು ಮತ್ತು ವಿಮ್ಸ್ ಆವರಣದಲ್ಲಿರುವ ಮಹಾತ್ಮಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಆಸ್ಪತ್ರೆಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಅವಿರತ ಹಾಗೂ ಅನನ್ಯ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ,ಬಿ.ನಾಗೇಂದ್ರ,ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ,ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here