ಆಕಸ್ಮಿಕ‌‌ ಮುಖ್ಯಮಂತ್ರಿಗಳಿಗೆ ಅಪಾಯ ಜಾಸ್ತಿ

0
860

ಕರ್ನಾಟಕಕ್ಕೆ ಆಕಸ್ಮಿಕ ಮುಖ್ಯಮಂತ್ರಿ ಸಿಕ್ಕಿದ್ದಾರೆ.
ಬಿಜೆಪಿಯಲ್ಲಿ ನಡೆದ ವಿದ್ಯಮಾನಗಳು ತಾವು ಕೆಳಗಿಳಿಯುವುದನ್ನು ಅನಿವಾರ್ಯವಾಗಿಸಿದಾಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕೈಗೊಂಡ ತೀರ್ಮಾನ ಇದಕ್ಕೆ ಕಾರಣ.
ಹೀಗೆ ಕರ್ನಾಟಕಕ್ಕೆ ದಕ್ಕಿದ ಆಕಸ್ಮಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಶಸ್ವಿ ಆಡಳಿತ ನೀಡಲು ಸಾಧ್ಯವೇ ಎಂಬುದು ಹೇಗೆ ಕುತೂಹಲದ ಪ್ರಶ್ನೆಯೋ?ಆಕಸ್ಮಿಕ ಮುಖ್ಯಮಂತ್ರಿಗಳಾದವರು ಯಶಸ್ವಿಯಾದ ಉದಾಹರಣೆ ಕೂಡಾ ಅಪರೂಪ ಎಂಬುದು ಇತಿಹಾಸ,
ಅಂದ ಹಾಗೆ ಕರ್ನಾಟಕದಲ್ಲಿ ಆಕಸ್ಮಿಕ ಮುಖ್ಯಮಂತ್ರಿಗಳ ಪರಂಪರೆ ಕಡಿದಾಳ್‌ ಮಂಜಪ್ಪ ಅವರಿಂದ ಶುರುವಾಗುತ್ತದೆ.
ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಹಾಗೂ ಸಾಹುಕಾರ್‌ ಚೆನ್ನಯ್ಯ ನಡುವಿನ ಸಂಘರ್ಷ ಹೆಚ್ಚಾದಾಗ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಚೆನ್ನಯ್ಯ ಅವರ ಬೆಂಬಲಕ್ಕೆ ನಿಲ್ಲುತ್ತಾರೆ.
ಇದರ ಪರಿಣಾಮವಾಗಿ ಕೆಂಗಲ್‌ ಹನುಮಂತಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಪರಿಸ್ಥಿತಿ ಉದ್ಭವವಾಗುತ್ತದೆ.ಈ ಹಂತದಲ್ಲಿ ಉದ್ಭವಿಸಿದ ಆಕಸ್ಮಿಕ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ.

ಆದರೆ ಅವರು ಬಹುಕಾಲ ಆ ಖುರ್ಚಿಯಲ್ಲಿ ಕೂರಲು ಸಾಧ್ಯವಾಗುವುದಿಲ್ಲ.ಕೆಲವೇ ತಿಂಗಳ ಕಾಲ ಅವರು ಸಿಎಂ ಹುದ್ದೆಯಲ್ಲಿ ಕೂರುತ್ತಾರೆ.
ಮುಂದೆ ೧೯೬೨ ರಲ್ಲಿ ಆಕಸ್ಮಿಕ ಮುಖ್ಯಮಂತ್ರಿ ಉದ್ಭವವಾಗುತ್ತಾರೆ.ಅವರ ಹೆಸರು ಎಸ್.ಆರ್.ಕಂಠಿ.ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಜಲಿಂಗಪ್ಪ ಅವರು ಸೋತು ಹೋಗುತ್ತಾರೆ.
ವಸ್ತುಸ್ಥಿತಿ ಎಂದರೆ ಚುನಾವಣೆಯ ತನಕ ಬಿ.ಡಿ.ಜತ್ತಿ ಮುಖ್ಯಮಂತ್ರಿಯಾಗಿದ್ದರೂ, ಚುನಾವಣೆಗಳ ನಂತರ ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗುವುದು ಬಹುತೇಕ ನಿಕ್ಕಿಯಾಗಿರುತ್ತದೆ.
ಇದನ್ನರಿತೇ ಅವರ ವಿರೋಧಿಗಳು ನಿಜಲಿಂಗಪ್ಪ ಅವರಿಗೆ ಖೆಡ್ಡಾ ತೋಡುತ್ತಾರೆ.ಜಾತಿಯ ಒಳಪಂಗಡಗಳ ರಾಜಕೀಯ ಅಸ್ತ್ರ ಉಪಯೋಗಿಸಿ ಅವರು ಸೋಲುವಂತೆ ಮಾಡುತ್ತಾರೆ.
ಈ ಹಂತದಲ್ಲಿ ಬಿ.ಡಿ.ಜತ್ತಿ ಅವರೇ ಪುನ: ಮುಖ್ಯಮಂತ್ರಿಯಾಗುವ ಲಕ್ಷಣಗಳು ಕಂಡಾಗ ನಿಜಲಿಂಗಪ್ಪ ಬಣ ತಿರುಗಿ ಬೀಳುತ್ತದೆ.ಅಷ್ಟೇ ಅಲ್ಲ,ತನಗಿರುವ ಬಲದಿಂದ ಎಸ್.ಆರ್.ಕಂಠಿ ಎಂಬ ನಾಯಕ ಮೇಲೆದ್ದು ಕೂರುವಂತೆ ಮಾಡುತ್ತದೆ.
ಶಾಸಕಾಂಗ ಪಕ್ಷದಲ್ಲಿ ನಿಜಲಿಂಗಪ್ಪ ಬಣ ಪವರ್‌ ಫುಲ್‌ ಆಗಿದ್ದುದರಿಂದ ಬಿ.ಡಿ.ಜತ್ತಿ ಅಸಹಾಯಕರಾಗುತ್ತಾರೆ. ಎಸ್.ಆರ್.ಕಂಠಿ ಆಕಸ್ಮಿಕವಾಗಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ.
ಆದರೆ ಕೆಲವೇ ಕಾಲದಲ್ಲಿ ನಿಜಲಿಂಗಪ್ಪ ಅವರು ಉಪಚುನಾವಣೆಯಲ್ಲಿ ಗೆಲ್ಲುತ್ತಾರೆ.ಗೆದ್ದ ನಿಜಲಿಂಗಪ್ಪ ಅವರಿಗೆ ಖುರ್ಚಿ ಬಿಟ್ಟು ಕೊಡುವುದರೊಂದಿಗೆ ಕಂಠಿ ಯುಗ ಮುಕ್ತಾಯವಾಗುತ್ತದೆ.
ಇದಾದ ನಂತರ ಕರ್ನಾಟಕದಲ್ಲಿ ಆಕಸ್ಮಿಕ ಮುಖ್ಯಮಂತ್ರಿಯಾಗಿ ಉದ್ಭವಿಸಿದ ನಾಯಕ ಎಂದರೆ ವೀರೇಂದ್ರಪಾಟೀಲ್.‌೧೯೬೭ ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ನಿಜಲಿಂಗಪ್ಪ ಅವರು ಮರು ವರ್ಷವೇ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾಗುತ್ತಾರೆ.
ಹೀಗೆ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಸನ್ನಿವೇಶ ಎದುರಾಗಿದ್ದರಿಂದ ನಿಜಲಿಂಗಪ್ಪ ಅವರು ತಮ್ಮ ಉತ್ತರಾಧಿಕಾರಿಯನ್ನುಆಯ್ಕೆ ಮಾಡುವ ಅನಿವಾರ್ಯತೆ ಉದ್ಭವವಾಗುತ್ತದೆ.
ಇತಿಹಾಸದ ಗರ್ಭದಲ್ಲಿ ಅಡಗಿ ಹೋದ ಸಂಗತಿ ಎಂದರೆ ಈ ಹಂತದಲ್ಲಿ ಮುಖ್ಯಮಂತ್ರಿಯಾಗಲು ನಿಜಲಿಂಗಪ್ಪ ಅವರು ಮೊದಲ ಆಫರ್‌ ಕೊಡುವುದು ತಮ್ಮ ಶಿಷ್ಯ ರಾಮಕೃಷ್ಣ ಹೆಗಡೆ ಅವರಿಗೆ.ಆದರೆ ಶಾಸಕಾಂಗದಲ್ಲಿ ಲಿಂಗಾಯತರ ಬಲ ಹೆಚ್ಚು.ಹೀಗಾಗಿ ನನ್ನ ಆಯ್ಕೆಯನ್ನು ಅವರು ವಿರೋಧಿಸಬಹುದು ಎನ್ನುವ ಹೆಗಡೆ ಆ ಆಫರ್‌ ಅನ್ನು ನಿರಾಕರಿಸುತ್ತಾರೆ.
ಈ ಸಂದರ್ಭದಲ್ಲಿ ವೀರೇಂದ್ರಪಾಟೀಲ್‌ ಅವಕಾಶ ಪಡೆಯುತ್ತಾರೆ.
ಆದರೆ ೧೯೭೧ ರ ಲೋಕಸಭಾ ಚುನಾವಣೆಯಲ್ಲಿ ಅವರ ನೇತೃತ್ವದ ಕಾಂಗ್ರೆಸ್(ಓ) ಸೋಲುತ್ತದೆ.
ಇದರ ಪರಿಣಾಮವಾಗಿ ದೊಡ್ಡ ಸೌಂಡಿನೊಂದಿಗೆ ಅಲುಗಾಡುವ ವೀರೇಂದ್ರ ಪಾಟೀಲರ ಸರ್ಕಾರ ಉರುಳುತ್ತದೆ.
ಮುಂದೆ ಕರ್ನಾಟಕದಲ್ಲಿ ಆಕಸ್ಮಿಕ ಮುಖ್ಯಮಂತ್ರಿಯ ಜನನವಾಗಿದ್ದು ೧೯೭೮ ರಲ್ಲಿ.ಆ ಹೊತ್ತಿಗೆ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಇಂದಿರಾಗಾಂಧಿ ನಡುವಣ ವಿಶ್ವಾಸ ಹಳಸಿಹೋಗಿರುತ್ತದೆ.
ಇದೇ ಕಾರಣಕ್ಕಾಗಿ ಅರಸರನ್ನು ಕೆಳಗಿಳಿಸಲು ಮುಂದಾದ ಇಂದಿರಾಗಾಂಧಿ ಅವರ ಕಣ್ಣಿಗೆ ಅಪ್ಯಾಯಮಾನವಾಗಿ ಕಂಡವರು ಆರ್.ಗುಂಡೂರಾವ್.ತಮ್ಮ ತಪ್ಪು ನಿರ್ಧಾರಗಳಿಂದ ರಾಜ್ಯದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಬರಲು ಕಾರಣರಾಗಿದ್ದೇ ಆರ್.ಗುಂಡೂರಾವ್.‌
೧೯೮೩ ರಲ್ಲಿ ಗುಂಡೂರಾಯರ ಸರ್ಕಾರ ಪತನವಾದ ನಂತರ ಆಕಸ್ಮಿಕ ಮುಖ್ಯಮಂತ್ರಿಯಾಗಿ ಉದ್ಭವಿಸುವವರು ರಾಮಕೃಷ್ಣ ಹೆಗಡೆ.ಅವತ್ತು ಚುನಾವಣೆಗಳಲ್ಲಿ ಜನತಾರಂಗ ಅಧಿಕಾರ ಹಿಡಿಯುವ ಸನ್ನಿವೇಶ ನಿರ್ಮಾಣವಾದಾಗ ಸಿಎಂ ಹುದ್ದೆಯ ರೇಸಿನಲ್ಲಿ ಕ್ರಾಂತಿರಂಗದ ನಾಯಕ ಎಸ್.ಬಂಗಾರಪ್ಪ,ಜನತಾ ಪಕ್ಷದ ನಾಯಕರಾದ ಹೆಚ್.ಡಿ.ದೇವೇಗೌಡ ಮತ್ತು ಎಸ್.ಆರ್.ಬೊಮ್ಮಾಯಿ ಸಿಎಂ ಹುದ್ದೆಯ ಆಕಾಂಕ್ಷಿಗಳಾಗಿರುತ್ತಾರೆ.
ಆದರೆ ರಾಷ್ಟ್ರ ನಾಯಕ,ಯಂಗ್‌ ಟರ್ಕ್‌ ಖ್ಯಾತಿಯ ಚಂದ್ರಶೇಖರ್‌ ಅವರ ಮೂಲಕ ಗೇಮ್‌ ಪ್ಲಾನು ರೂಪಿಸಿ ರಾಮಕೃಷ್ಣ ಹೆಗಡೆ ಸಿಎಂ ಹುದ್ದೆಯ ಮೇಲೆ ಬಂದು ಕೂರುತ್ತಾರೆ.
ಆಕಸ್ಮಿಕ ಮುಖ್ಯಮಂತ್ರಿಯಾದ ಕಾರಣಕ್ಕಾಗಿಯೇ ರಾಮಕೃಷ್ಣ ಹೆಗಡೆ ಅವರು ಎರಡು ವರ್ಷಗಳ ಕಾಲ ಮುಜುಗರ ಅನುಭವಿಸಬೇಕಾಗುತ್ತದೆ.ಒಂದೆಡೆ ಬೆಂಬಲ ನೀಡಿದ ಬಿಜೆಪಿ,ಮತ್ತೊಂದೆಡೆ ದೇವೇಗೌಡರ ಸಹಕಾರದಿಂದ ಸಿಎಂ ಆದ ಮುಲಾಜು,
ಹೀಗಾಗಿ ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಎದುರು ಜನತಾ ಪಕ್ಷಕ್ಕಾದ ಹೀನಾಯ ಸೋಲನ್ನು ನೆಪವಾಗಿಟ್ಟುಕೊಂಡು ಅವರು ವಿಧಾನಸಭೆಯನ್ನು ವಿಸರ್ಜಿಸುತ್ತಾರೆ.ಸ್ವಯಂ ಬಲದ ಮೇಲೆ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿ ಬಲಿಷ್ಟ ಮುಖ್ಯಮಂತ್ರಿಯಾಗಿ ಪ್ರತಿಷ್ಟಾಪಿತರಾಗುತ್ತಾರೆ.
ಇದಾದ ನಂತರ ಆಕಸ್ಮಿಕ ಮುಖ್ಯಮಂತ್ರಿಯಾದವರು ಇದೇ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ.೧೯೮೮ ರಲ್ಲಿ ರಾಮಕೃಷ್ಣ ಹೆಗಡೆ ಅವರು ಟೆಲಿಫೋನ್‌ ಕದ್ದಾಲಿಕೆ ಆರೋಪ ಹೊತ್ತು ಸಿಎಂ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬರುತ್ತದೆ.
ಈ ಸಂದರ್ಭದಲ್ಲಿ ಹೆಗಡೆ ಬೆಂಬಲಿಗ ಶಾಸಕರ ಬೆಂಬಲದಿಂದ ಆಕಸ್ಮಿಕ ಮುಖ್ಯಮಂತ್ರಿಯಾಗಿ ಉದ್ಭವಿಸಿದವರು ಎಸ್.ಆರ್.ಬೊಮ್ಮಾಯಿ.ಆದರೆ ಅವರು ಅವಧಿ ಪೂರೈಸಲೂ ಸಾಧ್ಯವಾಗದೆ ಕೆಳಗಿಳಿದರು.ಇದಕ್ಕೆ ರಾಜ್ಯಪಾಲ ವೆಂಕಟಸುಬ್ಬಯ್ಯ ಅವರ ದುಡುಕು ನಿರ್ಧಾರ ಕಾರಣವಾಗಿದ್ದು ನಿಜವಾದರೂ,ಹೆಗಡೆ ಮತ್ತು ದೇವೇಗೌಡರ ನಡುವಣ ಸಂಘರ್ಷದ ನಡುವೆ ಎಸ್.ಆರ್.ಬೊಮ್ಮಾಯಿ ಬಳಲಿದರು ಎಂಬುದು ನಿಜ.
ಇದಾದ ನಂತರ ರಾಜ್ಯದಲ್ಲಿ ಆಕಸ್ಮಿಕ ಸಿಎಂ ಆದವರು ಡಿ.ವಿ.ಸದಾನಂದಗೌಡ.ಆಕ್ರಮ ಗಣಿಗಾರಿಕೆ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ತಾವು ರಾಜೀನಾಮೆ ನೀಡುವುದು ಅನಿವಾರ್ಯವಾದಾಗ ಯಡಿಯೂರಪ್ಪ ಅವರು ಆಕಸ್ಮಿಕ ಮುಖ್ಯಮಂತ್ರಿಗೆ ಜನ್ಮ ಕೊಟ್ಟರು.
ಹೀಗೆ ಜನಿಸಿದ್ದೇ ಡಿ.ವಿ.ಸದಾನಂದಗೌಡ.ಆದರೆ ಆಕಸ್ಮಿಕವಾಗಿ ಜನಿಸಿದರೂ ನನ್ನತನ ಏನು ಅಂತ ತೋರಿಸುತ್ತೇನೆ ಎಂದು ಹೊರಟ ಕಾರಣಕ್ಕಾಗಿ ಸದಾನಂದಗೌಡರು ಖುರ್ಚಿ ಬಿಟ್ಟು ಕೆಳಗಿಳಿಯಬೇಕಾಯಿತು.ಮತ್ತು ಇದರಿಂದಾಗಿ ಮತ್ತೊಬ್ಬ ಆಕಸ್ಮಿಕ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಜನ್ಮ ತಾಳಿದರು.
ಆದರೆ ಅವರಿಗೆ ಸಿಕ್ಕ ಕಾಲಾವಕಾಶವೇ ಅತ್ಯಲ್ಪ.ಹೀಗಾಗಿ ಅವರು ಏನು ಅನ್ನುವುದು ಸ್ಪಷ್ಟವಾಗುವ ಮೊದಲೇ ಬಿಜೆಪಿ ಸರ್ಕಾರದ ಅವಧಿ ಮುಗಿದು ೨೦೧೩ ರ ವಿಧಾನಸಭಾ ಚುನಾವಣೆಗಳು ಎದುರಾದವು.
ಇದಾದ ಹಲ ವರ್ಷಗಳ ನಂತರ ಮತ್ತೊಮ್ಮೆ ಆಕಸ್ಮಿಕ ಮುಖ್ಯಮಂತ್ರಿಯಾಗಿ ಉದ್ಭವಿಸಿದ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯ ನೋಡುತ್ತಿದೆ.
ತಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದರೂ ಪಟ್ಟು ಬಿಡದ ಯಡಿಯೂರಪ್ಪ, ಸರ್ಕಾರದ ಮೇಲಿನ ನಿಯಂತ್ರಣಕ್ಕಾಗಿ ಬಸವರಾಜ ಬೊಮ್ಮಾಯಿ ಅವರು ಜನ್ಮ ತಳೆಯಲು ಕಾರಣರಾಗಿದ್ದಾರೆ.
ಆದರೆ ಹೀಗೆ ಅವಕಾಶ ಪಡೆದ ಬೊಮ್ಮಾಯಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ?ಎಂಬುದೇ ಸಧ್ಯದ ಕುತೂಹಲ.ಅಂದ ಹಾಗೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರು ಹೆಗಡೆ-ದೇವೇಗೌಡರ ನಡುವಣ ಸಂಘರ್ಷವನ್ನು ನಿಭಾಯಿಸಲಾಗದೆ ಕುಸಿದಿದ್ದರು.
ಈಗ ಬಸವರಾಜ ಬೊಮ್ಮಾಯಿ ಅವರೂ ಇಂತಹದೇ ಸನ್ನಿವೇಶವನ್ನು ಎದುರಿಸಬೇಕಾಗಿದೆ.ಅವರೀಗ ಏಕಕಾಲಕ್ಕೆ ಯಡಿಯೂರಪ್ಪ ಮತ್ತವರ ವಿರೋಧಿಗಳನ್ನು ನಿಭಾಯಿಸಬೇಕಾಗಿದೆ.
ಏಕಕಾಲಕ್ಕೆ ಅವರು ಯಡಿಯೂರಪ್ಪ ಅವರಿಗೂ ಆಪ್ತರು.ಸಂಘಪರಿವಾರದಿಂದ ಉದ್ಭವಿಸಿದ ಶಕ್ತಿ ಬಿ.ಎಲ್.ಸಂತೋಷ್‌ ಅವರಿಗೂ ಸಹನೀಯ ಅನ್ನಿಸಿಕೊಂಡವರು ಎಂಬ ಮಾತುಗಳು ಇದ್ದಕ್ಕಿದ್ದಂತೆ ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿವೆಯಾದರೂ,ಪರಿಸ್ಥಿತಿ ಅಂದುಕೊಂಡಷ್ಟು ಸರಳವಾಗಿಲ್ಲ.
ಬಸವರಾಜ ಬೊಮ್ಮಾಯಿ ಅವರೇನಾದರೂ ಸಂತೋಷ್‌ ಅವರ ಮಾತಿನಂತೆ ನಡೆಯುತ್ತಿದ್ದಾರೆ ಎಂಬ ಸುಳಿವು ಸಿಕ್ಕರೆ ಖುದ್ದು ಯಡಿಯೂರಪ್ಪ ಮುಂದೆ ನಿಂತು ಬೊಮ್ಮಾಯಿ ಅವರನ್ನು ಅಲುಗಾಡಿಸುತ್ತಾರೆ. ಹಾಗೊಂದು ವೇಳೆ ಯಡಿಯೂರಪ್ಪ ಅವರಿಗೆ ಅಂಟಿಕೊಂಡೇ ಮುಂದುವರಿದರೆ ಬಿ.ಎಲ್.ಸಂತೋಷ್‌ ನಿರ್ಮಿಸುವ ಚಕ್ರವ್ಯೂಹದಲ್ಲಿ ಸಿಲುಕಬೇಕಾಗುತ್ತದೆ.
ಇದರ ಮಧ್ಯೆ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಲು ಸಾಧ್ಯವೇ?ಎಂಬುದು ಸಧ್ಯದ ಬಹುಮುಖ್ಯ ಪ್ರಶ್ನೆ.
ಅಂದ ಹಾಗೆ ಮಹಾನಾಯಕರ ನಿರ್ಗಮನದ ಘಳಿಗೆಯಲ್ಲಿ,ಪಟ್ಟಕ್ಕಾಗಿ ಕಚ್ಚಾಟದ ಅಗ್ನಿಕುಂಡ ನಿರ್ಮಾಣವಾದ ಸಂದರ್ಭದಲ್ಲಿ‌ ಉದ್ಭವಿಸುವ ಆಕಸ್ಮಿಕ ಮುಖ್ಯಮಂತ್ರಿಗಳ ಪೈಕಿ ಯಶಸ್ವಿಯಾದವರು ರಾಮಕೃಷ್ಣ ಹೆಗಡೆ ಮಾತ್ರ.
ಬಸವರಾಜ ಬೊಮ್ಮಾಯಿ ಅವರು ಮತ್ತೊಬ್ಬ ಹೆಗಡೆ ಆಗುತ್ತಾರೆ ಅಂತ ನಿರೀಕ್ಷಿಸುವುದು ಕಷ್ಟ.ಆದರೆ ರಾಜ್ಯದ ಹಿತ ಕಾಪಾಡುವ ವಿಷಯದಲ್ಲಿ ಅವರು ತಮ್ಮತನ ತೋರಬೇಕು ಅನ್ನುವುದು ಸಧ್ಯದ ನಿರೀಕ್ಷೆ.

ಆರ್‌.ಟಿ.ವಿಠ್ಠಲಮೂರ್ತಿ

LEAVE A REPLY

Please enter your comment!
Please enter your name here